ದೈವೀಕರಣ
	ಅತ್ಯಂತ ಶ್ರೇಷ್ಠನಾದ ಮಾನವನನ್ನು ದೈವಪಟ್ಟಕ್ಕೆ ಏರಿಸುವುದೇ ದೈವೀಕರಣ (ಡೀಯಿಫಿಕೇಷನ್).  ವಿಶ್ವದ ಎಲ್ಲ ಜನಾಂಗಗಳಲ್ಲೂ ಕಂಡುಬರುತ್ತದೆಯಾದರೂ ಇದು ವಿಶೇಷ ರೂಪ ತಾಳಿದ್ದು ಪ್ರಾಚೀನ ಭಾರತ, ಚೀನ, ಈಜಿಪ್ಟ್, ಗ್ರೀಸ್  ಮತ್ತು ಇಟಲಿಗಳಲ್ಲಿ.

	ಮಾನವರಾಗಿದ್ದು ದೈವತ್ವ ಪಡೆದವರಲ್ಲಿ ಭಾರತದಲ್ಲಿ ಮುಖ್ಯರಾದವರು ಮಹದೇವತೆಗಳಾದ ಶಿವ ಮತ್ತು ಕೃಷ್ಣ.  ಇವರು ಕೆಲವು ಗಿರಿ ಮತ್ತು ಅರಣ್ಯ ಪ್ರದೇಶಗಳ ಜನರ ದೇವತೆಗಳಾಗಿದ್ದು ಕಾಲಕ್ರಮದಲ್ಲಿ ಶಿವ ವೇದದ ರುದ್ರನಲ್ಲಿ ಐಕ್ಯನಾಗಿ ಕೃಷ್ಣ ವೇದದ ವಿಷ್ಣುವಿನಲ್ಲಿ ಐಕ್ಯನಾಗಿ ಇವರಿಬ್ಬರೂ ವೈದಿಕ ದೇವತೆಗಳಾದರು.  ವೇದದ ಕಾಲದಲ್ಲಿ ಪ್ರಬಲನಾಗಿದ್ದ ಬ್ರಹ್ಮನಿಗಿಂತ ವೇದದ ಅನಂತರ ಶಿವ ಮತ್ತು ವಿಷ್ಣು ಪ್ರಬಲದೇವತೆಗಳಾದರು.  ಮಾನವರನ್ನು ದೈವದ ಪಟ್ಟಕ್ಕೆ ಏರಿಸುವುದು ಇವರಿಬ್ಬರೂ ದೇವಾಧಿ ದೇವತೆಗಳಾದ ಮೇಲೂ ನಿಲ್ಲಲಿಲ್ಲ.  ಪರಶುರಾಮ ರುದ್ರಾವತಾರ, ಶ್ರೀರಾಮ ವಿಷ್ಣುವಿನ ಅವತಾರಗಳಲ್ಲಿ ಒಬ್ಬ.  ಬೌದ್ಧ ಧರ್ಮ ತುಂಬ ಪ್ರಬಲವಾದಾಗ ವೈದಿಕರು ಬುದ್ಧನನ್ನೂ ವಿಷ್ಣುವಿನ ಅವತಾರವಾಗಿ ಭಾವಿಸಿದರು.  ಜೈನ ಮತ ಸ್ಥಾಪಕನಾದ ಮಹಾವೀರನನ್ನು ಜೈನರು ತೀರ್ಥಂಕರನೆಂದು ಭಾವಿಸಿ ಇತರ ತೀರ್ಥಂಕರರನ್ನು ಪೂಜಿಸುವಂತೆ ಅವನನ್ನು ಪೂಜಿಸಿದರು.  ತೀರ್ಥಂಕರರು ಸೃಷ್ಟಿಕರ್ತ ದೇವತೆಗಳಲ್ಲ.  ಹಾಗೆಯೇ ವಿಷ್ಣುವಿನ ಅವತಾರಗಳು ಸೃಷ್ಟಿಕರ್ತ ದೈವಗಳಲ್ಲ.  ವಿಷ್ಣು ಒಬ್ಬನೇ ಸೃಷ್ಟಿಕರ್ತ.  ವಿಶ್ವದಲ್ಲಿ ಭೂಭಾರ ಹೆಚ್ಚಿದಾಗ ಅದನ್ನು ಇಳಿಸಲು ವಿಷ್ಣು ಮಾನವರ ರೂಪ ತಾಳಿದಾಗ ಅಂಥ ವಿಷ್ಣುವಿನ ರೂಪಗಳು ಅವತಾರಗಳು ಎನಿಸಿದವು.  ಈ ಅವತಾರ ದೇವತೆಗಳೆಲ್ಲ ಧರ್ಮವೀರರು ; ಅವರು ಧರ್ಮವನ್ನು ಎತ್ತಿ ಹಿಡಿಯಲು ಭೂಲೋಕಕ್ಕೆ ಇಳಿದು ಬಂದವರು.

	ಚೀನದಲ್ಲಿ ಕೂಂಗ್‍ಫೂಟ್ಸೆ ಮತವನ್ನು ಸ್ಥಾಪಿಸಿದ ಕೂಂಗ್‍ಫೂಟ್ಸೆ ಗತಿಸಿದ ಅನಂತರ ಚೀನಿಯರು ಆತನಿಗಾಗಿ ದೇವಸ್ಥಾನಗಳನ್ನು ಏರ್ಪಡಿಸಿ ಅವನಿಗೆ ಪೂಜೆ ಸಲ್ಲಿಸಿದರು.  ಅವರಲ್ಲಿ ಪಿತೃಪೂಜೆಯೇ ಮುಖ್ಯ ಮತಸಂಸ್ಕಾರ.  ಅವರು ಕೂಂಗ್‍ಫೂಟ್ಸೆಗೆ ದೇವಸ್ಥಾನವನ್ನು ಕಟ್ಟಿ ಅವನಿಗೆ ಪೂಜೆ ಸಲ್ಲಿಸಿದ್ದು ಅವನು ಸೃಷ್ಠಿಕರ್ತನಾದ ದೈವವೆಂಬ ಭಾವನೆಯಿಂದಲ್ಲ.  ಪವಿತ್ರಾತ್ಮನೆಂಬ ಭಾವನೆಯಿಂದ.  ಆದ್ದರಿಂದ ಚೀನಿಯರ ದೈವೀಭಾವನೆ ಜೈನರ ದೈವೀಭಾವನೆಯನ್ನು ಹೋಲುತ್ತದೆ.  ಧರ್ಮವೀರನಾಗಿ ಮಹಾವೀರ ದೈವತ್ವಕ್ಕೆ ಏರಿದ.  ಹಾಗೆಯೇ ಕೂಂಗ್‍ಫೂಟ್ಸೆ ಕೂಡ ಧರ್ಮವೀರನಾದ್ದರಿಂದ ಚೀನಿಯರು ಅವನನ್ನು ದೈವಪದವಿಗೆ ಏರಿಸಿದರು.

	ಗ್ರೀಸಿನಲ್ಲಿ ದೈವೀಕರಣ ಧರ್ಮವೀರ್ಯಕ್ಕೆ ಸಂಬಂಧಪಟ್ಟದ್ದಲ್ಲ.  ಅದು ಮುಖ್ಯವಾಗಿ ಯುದ್ಧ ವೀರ್ಯಕ್ಕೆ ಸಂಬಂಧಪಟ್ಟದ್ದು.  ದೇವರಿಗೆ ಸಲ್ಲತಕ್ಕ ಗೌರವವನ್ನು ಗ್ರೀಕರು ಮಾನವರಿಗೆ ಸಲ್ಲಿಸಿದ್ದು ತಮ್ಮ ದೇಶವನ್ನು ಅಸಾಧಾರಣ ಪೌರುಷದಿಂದ ಕಾಪಾಡಿದ ಯೋಧರಿಗೆ ಮತ್ತು ರಾಜರಿಗೆ.  ಪೋಪರುಗಳಿಗೆ ಸಲ್ಲಿಸಬೇಕಾದ ಪೂಜೆಯನ್ನು ಗ್ರೀಸಿನ ಚರಿತ್ರೆಯಲ್ಲಿ ಮೊಟ್ಟಮೊದಲಿಗೆ ಕ್ರಿ. ಪೂ. 5ನೆಯ ಶತಮಾನದಲ್ಲಿ ಸಲ್ಲಿಸಿದ್ದು ಸಾಮಾಸಿನ ಲೈಸಾಂಡರ್‍ಗೆ.  ಕ್ರಿ. ಪೂ. 357 ರಲ್ಲಿ ಡಯಾನ್ ಸಿರಕ್ಯೂಸನ್ನು ಪ್ರವೇಶಿಸಿದಾಗ ಪೌರರು ಅವನಿಗೆ ದೇವರಿಗೆ ಅರ್ಪಿಸುವಂತೆ ಬಲಿಯನ್ನರ್ಪಿಸಿ ಸ್ತೋತ್ರವನ್ನು ಪಠಿಸಿದರು.  ಹಿರಾಕ್ಲೀಸಿನ ನಿರಂಕುಶ ಪ್ರಭು ಕ್ಲಿಯರ್ಕಸ್ ಒಲಿಂಪಿಯದ ದೇವತೆಗಳ ಲಾಂಛನಗಳನ್ನು ಧರಿಸಿ ತನ್ನ ಬಳಿಗೆ ಬರುವವರು ತನಗೆ ಅಡ್ಡಬೀಳಬೇಕೆಂದು ಬಲಾತ್ಕರಿಸಿದ.  ಅಂತೆಯೇ ಅಲೆಗ್ಸಾಂಡರ್ ಮಹಾಶಯ ದಿಗ್ವಿಜಯಾನಂತರ ತನ್ನನ್ನು ದೈವದಂತೆ ಪೂಜಿಸಬೇಕೆಂದು ಒತ್ತಾಯಪಡಿಸಿದ.  ಅಲೆಗ್ಸಾಂಡರ್ ತಾನು ಜ್ಯೂಸ್ ಲಿಮ್ಮನ್ ದೈವದ ಪುತ್ರನೆಂದು ಸಾರಿಸಿದ.  ಅಲ್ಲಿಂದಾಚೆಗೆ ಒಂದೊಂದು ರಾಷ್ಟ್ರವೂ ತಾನು ಇಷ್ಟಪಟ್ಟ ವೀರನಿಗೆ ಅಥವಾ ಕ್ರೀಡಾಪಟುವಿಗೆ ದೈವತ್ವವನ್ನು ಕೊಡುವ ಅಧಿಕಾರ ವಹಿಸಿಕೊಂಡಿತು.  ದೈವಪದವಿಯನ್ನು ಕೊಟ್ಟವರಿಗೆ ಸರ್ಕಾರ ದೇವಸ್ಥಾನಗಳನ್ನು ಕಟ್ಟಿಸಿ ಅವರಿಗೆ ಪೂಜೆ ಸಲ್ಲಿಸುವುದು ಪ್ರಾರಂಭವಾಯಿತು.

	ಇಟಲಿಯಲ್ಲಿ ಗ್ರೀಕ್ ಸಂಸ್ಕøತಿ ಬೇರೂರುವುದಕ್ಕೆ ಮುಂಚೆ ದೈವೀಕರಣ ಭಾವನೆ ಇರಲಿಲ್ಲ.  ಗ್ರೀಕರ ಸಂಸ್ಕøತಿ ಸ್ಥಿರವಾಗಿ ನೆಲೆಸಿದ ಮೇಲೆ ಅಸಾಧಾರಣ ಪುರುಷನಿಗೆ ಅವರ ಬಂಧುಗಳು ಮತ್ತು ಮಿತ್ರರು ದೇವರಿಗೆ ಸಲ್ಲುವ ಪೂಜೆಯನ್ನು ಸಲ್ಲಿಸಲು ಪ್ರಾರಂಭಿಸಿದರು.  ಹೀಗೆ ಪೂಜಿಸಲ್ಪಟ್ಟವರು ಪೂಜಾ ಪ್ರಭುತ್ವದ ಕೊನೆಯ ಕಾಲದಲ್ಲಿದ್ದ ಮೆಟೆಲಸ್ ಫಯಸ್ ಮತ್ತು ಮೇರಿಯಸ್ ಗ್ರಾಟಿಡಯಾನಸ್.  ಜ್ಯೂಲಿಯಸ್ ಸೀಜರ್ ಪ್ರಬಲನಾದ ಕಾಲದಲ್ಲಿ ಮೆರವಣಿಗೆಗಳ ಕಾಲದಲ್ಲಿ ದೇವರುಗಳ ವಿಗ್ರಹಗಳ ಜೊತೆಯಲ್ಲಿ ಅವನ ವಿಗ್ರಹವೂ ಸೇರಿತು.  ತಿಂಗಳುಗಳ ಹೆಸರುಗಳಲ್ಲಿ ಅವನದು ಒಂದಾಯಿತು.  ಕ್ರಿ. ಪೂ. 45 ರಲ್ಲಿ ಜೂಪಿಟರ್ ಸೀಜರನ ದೇವಸ್ಥಾನವೂ ಸ್ಥಾಪಿತವಾಯಿತು.  ಮಾರ್ಕ್ ಆಂಟೊನಿ ದೈವದ ಅರ್ಚಕನಾಗಬೇಕಾಗಿತ್ತು.  ಕ್ರಿ. ಪೂ. 44 ರಲ್ಲಿ ಸೀಜರನ ಕೊಲೆಯಾದ ಮೇಲೆ ಆ ಏರ್ಪಾಡು ಕಾರ್ಯಗತವಾಗಲಿಲ್ಲ.  ಒಂದು ವರ್ಷದ ಅನಂತರ ಒಂದು ಧೂಮಕೇತು ಕಾಣಿಸಿಕೊಂಡಾಗ ಸೀಜರ್ ದೈವತ್ವ ಪಡೆದು ಆ ಧೂಮಕೇತುವಾದನೆಂದು ರೋಮಿನ ಪ್ರಜೆಗಳು ನಂಬಿದರು.  ಸೀಜರನ ಪಕ್ಷ ಬಲಗೊಂಡಾಗ ಅವನ ಪೂಜೆಯನ್ನು ಅಂದಿನ ಸರ್ಕಾರ ಬಳಕೆಗೆ ತಂತು.  ಅಗಸ್ಟಸ್ ಚಕ್ರವರ್ತಿ ತಾನು ಬದುಕಿದ್ದ ಕಾಲದಲ್ಲಿ ತನ್ನನ್ನು ದೈವದಂತೆ ಪೂಜಿಸಕೂಡದೆಂದು ಆಜ್ಞಾಪಿಸಿದ್ದ.  ಆದರೆ ಕ್ರಿ. ಶ. 14 ರಲ್ಲಿ ಅವನು ಕಾಲವಾದ ಮೇಲೆ ಅವನ ಪೂಜೆಗೆ ಯಾವ ನಿರ್ಬಂಧವೂ ಇಲ್ಲದೆ ತುಂಬ ವಿಜೃಂಭಣೆಯಿಂದ ನಡೆಯಿತು.  ಜೂಲೈ ಮತ್ತು ಆಗಸ್ಟ್ ತಿಂಗಳುಗಳ ಹೆಸರುಗಳು ಜೂಲಿಯಸ್ ಸೀಜರ್ ಮತ್ತು ಅಗಸ್ಟಸ್ ಚಕ್ರವರ್ತಿಗಳ ಪವಿತ್ರತೆಯ ಸ್ಮಾರಕಗಳು.  ಅಗಸ್ಟಸನ ಅನಂತರ ರೋಮನ್ ಚಕ್ರವರ್ತಿಗಳ ದೈವೀಕರಣ ಸಾಮಾನ್ಯವಾಯಿತು.
(ಜಿ.ಎಚ್.; ಎಸ್‍ಡಬ್ಲ್ಯೂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ